ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ – ಸೋಮವಾರದಿಂದ ಶುಕ್ರವಾರದವರೆಗೆ ಏಪ್ರಿಲ್ 26 ರಿಂದ 6:00 ಪಿ.ಎಂ
ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿ ಪ್ರಸಾರ

ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿದ್ದ “ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್” ಪ್ರಸಾರದ ಸಮಯ ಬದಲಾವಣೆಯಾಗಿದೆ. ಶನಿವಾರ ಹಾಗೂ ಭಾನುವಾರ ಮಾತ್ರ ಪ್ರಸಾರವಾಗುತ್ತಿದ್ದ ಈ ಜನಪ್ರಿಯ ಧಾರಾವಾಹಿ ವೀಕ್ಷಕರು ಪ್ರತಿನಿತ್ಯ ವೀಕ್ಷಿಸುವ ಒತ್ತಾಯ ಮಾಡಿದ್ದರಿಂದ ದೈನಂದಿನ ಧಾರಾವಾಹಿಯಾಗಿ ಪರಿವರ್ತಿಸಲಾಹಿದೆ. ಈಗ ಇದು ವಾರಾಂತ್ಯದ ಬದಲಿಗೆ ಪ್ರತಿನಿತ್ಯ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6:00 ಗಂಟೆಗೆ ಪ್ರಸಾರವಾಗಲಿದೆ. ಜುಲೈ 04, 2020 ಕನ್ನಡ ಕಿರುತೆರೆ ಇತಿಹಾಸದಲ್ಲಿ ಒಂದು ಮೈಲಿಗಲ್ಲು “ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್” ಧಾರಾವಾಹಿ ಪ್ರಾರಂಭವಾಗಿದ್ದನ್ನು ಇಡೀ ವೀಕ್ಷಕರು ಸಂಭ್ರಮದಿಂದ ಸ್ವಾಗತಿಸಿದರು. ಈ ಧಾರಾವಾಹಿಯನ್ನು ಜನರು ಒಟ್ಟಾಗಿ ಕೂತು ಎಲ್.ಇ.ಡಿ. ಸ್ಕ್ರೀನ್ ಗಳಲ್ಲಿ ವೀಕ್ಷಿಸಿದ್ದೇ ಅಲ್ಲದೆ ಈ ಧಾರಾವಾಹಿಯ ಶೀರ್ಷಿಕೆ ಗೀತೆ ಸೂಪರ್ ಹಿಟ್ ಆಯಿತು.
ಧಾರಾವಾಹಿ ವೀಕ್ಷಿಸಿ ಎಂಬ ಪೋಸ್ಟರ್ ಗಳನ್ನು ಪ್ರಮುಖ ವೃತ್ತಗಳಲ್ಲಿ ಅಂಟಿಸಿ, ಪುಟ್ಟ ಮಕ್ಕಳು ಟಿ.ವಿ.ಗೆ ಆರತಿ ಬೆಳಗಿದರು. ಧಾರಾವಾಹಿಯಲ್ಲಿ ಅಂಬೇಡ್ಕರ್ ಜನಿಸಿದ ಕ್ಷಣದಲ್ಲಿ ಈಡುಗಾಯಿ ಒಡೆದರು. ಧನ್ಯವಾದ ಸಲ್ಲಿಸಿ ಸಾವಿರಾರು ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದರು. ಫೇಸ್ ಬುಕ್ ಪೋಸ್ಟ್ ಗಳನ್ನು ಲಕ್ಷಾಂತರ ಮಂದಿ ವೀಕ್ಷಿಸಿದರು. ಪುಟ್ಟ ಭೀಮರಾವ್ ಅಭಿನಯಕ್ಕೆ ವೀಕ್ಷಕರು ಮಾರು ಹೋಗಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಈ ಧಾರಾವಾಹಿಯ ಬ್ಯಾನರ್ ಹಾಗೂ ಕಟೌಟ್ ಗಳನ್ನು ನಿರ್ಮಿಸಿ ಉತ್ತೇಜಿಸಿದರು.
ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಬಾಲ್ಯದಿಂದಲೇ ಅಸ್ಪೃಶ್ಯತೆಯ ಸಂಕಷ್ಟ ಎದುರಿಸಿದರೂ ಕಂಗೆಡದೆ ತಮ್ಮ ವಿದ್ಯಾಭ್ಯಾಸ ಪೂರೈಸಿ ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸುವ, ಅವರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕನಾಗಿ ಬೆಳೆಯುತ್ತಾರೆ. ಸ್ವತಂತ್ರ ಭಾರತದಲ್ಲಿ ಕಾನೂನು ಸಚಿವರಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅವರ ಕೊಡುಗೆ ಅನುಪಮವಾದುದು. ಅವರ ಸೇವೆಯನ್ನು ಗುರುತಿಸಿ 1990ರಲ್ಲಿ ಮರಣೋತ್ತರವಾಗಿ ಅವರಿಗೆ “ಭಾರತ ರತ್ನ” ನೀಡಿ ಪುರಸ್ಕರಿಸಲಾಗಿದೆ.
ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿಯ ಶೀರ್ಷಿಕೆ ಗೀತೆಯ ಕಾಲರ್ ಟ್ಯೂನ್ ಅನ್ನು ಬಿಡುಗಡೆ ಮಾಡಲಾಗಿದೆ. ಧಾರಾವಾಹಿಯ ಪೋಸ್ಟರ್ ಗಳು ಮಾರುಕಟ್ಟೆಗೆ ಬಂದಿವೆ. ಡಾ.ಅಂಬೇಡ್ಕರ್ ಅವರ ಕುರಿತಾದ ಪತ್ರಿಕಾ ಲೇಖನಗಳನ್ನು ಹಂಚಿಕೊಳ್ಳುತ್ತಿದ್ದು ಹಿಂದೆಂದೂ ಕಾಣದಂತಹ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದೆ. ಅಂಬೇಡ್ಕರ್ ಧಾರಾವಾಹಿ ಪ್ರತಿ ಮನೆ ಮನವನ್ನೂ ಮುಟ್ಟಿದೆ ಮತ್ತು ಇದು ಜನರು ಬರೀ ವೀಕ್ಷಿಸುತ್ತಿರುವ ಧಾರಾವಾಹಿಯಲ್ಲ ಬದಲಾಗಿ ಸಂಭ್ರಮಿಸುತ್ತಿರುವ ಧಾರಾವಾಹಿಯಾಗಿದೆ. ಸಮಾಜದ ಎಲ್ಲ ವಯೋಮಾನದವರು ಹಾಗೂ ವರ್ಗದವರು ಒಟ್ಟಾಗಿ ಸಂಭ್ರಮಿಸಿದ ಧಾರಾವಾಹಿ ಮತ್ತೊಂದಿಲ್ಲ. ಸಾಮಾನ್ಯವಾಗಿ ಧಾರಾವಾಹಿಗಳು ಮಹಿಳೆಯರು ಹಾಗೂ ವೃದ್ಧರನ್ನು ಸೆಳೆಯುತ್ತವೆ. ಆದರೆ ವಯಸ್ಸಿನ ಮಿತಿಗಳಿಲ್ಲದೆ ಮಕ್ಕಳು, ಯುವಜನರು, ಗೃಹಿಣಿಯರು ಹಾಗೂ ನಿವೃತ್ತರನ್ನು ಒಂದೇ ಆಕರ್ಷಣೆ ಪಡೆದಿರುವ ಏಕೈಕ ಧಾರಾವಾಹಿ ಇದಾಗಿದೆ.