
ಇತ್ತೀಚೆಗೆ ತುಮಕೂರಿನಲ್ಲಿ ಹೆರಿಗೆ ನೋವಿಂದ ಒದ್ದಾಡುತ್ತಿದ್ದ ಬಡ ತುಂಬುಗರ್ಭಿಣಿ ಬಳಿ ಆಧಾರ ಕಾರ್ಡಿಲ್ಲ, ಮಾತೃ ಕಾರ್ಡಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಗೆ ಸೇರಿಸಿಕೊಳ್ಳದೇ ಹೊರ ಕಳಿಸಿದ ಘಟನೆ ನಡೆದಿತ್ತು. ಬಯಲಲ್ಲಿ ಹೆರಿಗೆಯಾಗಿ ಶುಶ್ರೂಷೆ ಸಿಗದೆ ರಕ್ತಸ್ರಾವದಿಂದ ತಾಯಿ ಹಾಗೂ ಅವಳಿ ಶಿಶುಗಳು ಮರಣವನ್ನಪ್ಪಿದ್ದರು. ಈ ಮೊದಲೇ ತಂದೆಯನ್ನು ಕಳೆದುಕೊಂಡಿದ್ದ ಆಕೆಯ 6 ವರ್ಷದ ಮಗಳು ಅನಾಥೆಯಾದಳು. ಈ ಘಟನೆಯನ್ನು ಆಧರಿಸಿ, ಉದಯ ವಾಹಿನಿಯು ರಾತ್ರಿ ೮:೩೦ರ ಧಾರಾವಾಹಿ ʼರಾಧಿಕಾʼ ವಿಶೇಷ ಸಂಚಿಕೆಗಳನ್ನು ರೂಪಿಸಿದೆ. ಇಲ್ಲಿ ರಾಧಿಕಾ ಓರ್ವ ನರ್ಸ್. ಆಕೆ ಕೆಲಸ ಮಾಡುವ ಆಸ್ಪತ್ರೆ, ಹಳ್ಳಿಯಲ್ಲಿ ಉಚಿತ ಮೆಡಿಕಲ್ ಕ್ಯಾಂಪ್ ಅಯೋಜಿಸುತ್ತದೆ. ಆ ಸಂದರ್ಭದಲ್ಲಿ ತುಂಬುಗರ್ಭಿಣಿ ಒಬ್ಬಳು ತನ್ನ ಪುಟ್ಟ ಮಗಳೊಂದಿಗೆ ಹೆರಿಗೆ ನೋವೆಂದು ಬರುತ್ತಾಳೆ. ಮಾನವೀಯತೆ ಮರೆತ ವೈದ್ಯ, ಕಥೆಯ ಖಳನಾಯಕ ಗೌತಮ್ ಆಧಾರ್ ಕಾರ್ಡ್ ಇಲ್ಲ ಅಂತ ಶುಶ್ರೂಷೆ ನಿರಾಕರಿಸುತ್ತಾನೆ. ರಾಧಿಕಾ ಇದನ್ನು ಗಮನಿಸುತ್ತಾಳೆ.
ನಿಯಮಗಳು ಮತ್ತು ಮಾನವೀಯತೆಯ ಮಧ್ಯೆ ರಾಧಿಕಾಳ ತೊಳಲಾಟ ಶುರುವಾಗುತ್ತದೆ. ಕೊನೆಗೆ ಏನಾದರಾಗಲಿ ಎಂದು ರಾಧಿಕಾ ದೃಢ ನಿರ್ಧಾರ ಕೈಗೊಳ್ಳುತ್ತಾಳೆ. ಆದರೆ ಕ್ಯಾಂಪಿನ ಆಚೆ ಬರುವುದಕ್ಕೇ ಆಕೆಗೆ ಅಡೆತಡೆಗಳಿವೆ. ಅದನ್ನೆಲ್ಲ ಮೀರಿ ಮುನ್ನುಗ್ಗುತ್ತಾಳಾ? ಬಡ ಗರ್ಭಿಣಿಯ ಹೆರಿಗೆಯನ್ನು ಹೇಗೆ ಮಾಡಿಸುತ್ತಾಳೆ? ಶಿಶುವನ್ನು ಬದುಕಿಸುವಲ್ಲಿ ಯಶಸ್ವಿಯಾಗುತ್ತಾಳಾ? ಎಂಬ ಕುತೂಹಲಗಳಿಗೆ ಉತ್ತರ ವಿಶೇಷ ಸಂಚಿಕೆಗಳಲ್ಲಿದೆ.
ಒಟ್ಟಿನಲ್ಲಿ ಬಡ ರೋಗಿಗಳ ವಿಷಯದಲ್ಲಿ ನಿಯಮ, ಹಣಕ್ಕಿಂತ ಮಾನವೀಯತೆಯಿಂದ ಕೈಗೊಳ್ಳುವ ತಕ್ಷಣದ ನಿರ್ಧಾರ ಮುಖ್ಯ ಎಂಬ ಸಂದೇಶವನ್ನು ʻರಾಧಿಕಾʼ ಸಾರುತ್ತಾಳೆ. ಆದರೆ ವೃತ್ತಿ ಜೀವನದಲ್ಲಿ ನಿಯಮ ಮೀರಿದ ಆರೋಪ ಎದುರಾದಾಗ ರಾಧಿಕಾ ಅದನ್ನು ಹೇಗೆ ನಿಭಾಯಿಸುತ್ತಾಳೆ ಎಂಬದೂ ಕುತೂಹಲಕರ.
ಈ ನಡುವೆ ಈ ಮೆಡಿಕಲ್ ಕ್ಯಾಂಪ್ ಪ್ರಾಯೋಜಕ ಬೇರಾರೂ ಅಲ್ಲ, ನಾಯಕ ಚಿರಂತ್ ಎಂಬ ವಿಷಯ ಗೊತ್ತಾಗುತ್ತದೆ. ಚಿರಂತ್ ತನ್ನ ಸಮಾಜಮುಖಿ ಕೆಲಸಗಳಿಂದ ರಾಧಿಕಾಳ ಮನ ಗೆಲ್ಲುತ್ತಾನಾ? ಅವನ ಪ್ರೀತಿಯನ್ನು ರಾಧಿಕಾ ಸ್ವೀಕರಿಸುತ್ತಾಳಾ? ರಾಧಿಕಾ ತಾನು ಮಾಡಿದ ಆ ಒಂದು ಒಳ್ಳೆ ಕೆಲಸದಿಂದ ಹೇಗೆ ಖ್ಯಾತಳಾಗುತ್ತಾಳೆ ಎಂಬ ಅಂಶಗಳೂ ರೋಚಕವಾಗಿವೆ. ಕ್ಯಾಂಪ್ ಫೈರ್, ಹಾಡು, ನೃತ್ಯ, ಆಟೋಟಸ್ಪರ್ಧೆಗಳು ಸಹ ಈ ವಿಶೇಷ ಸಂಚಿಕೆಗಳಲ್ಲಿವೆ.
ದೃಢ ಮನಸ್ಸಿನ ಗಟ್ಟಿಗಿತ್ತಿ ರಾಧಿಕಾ ನರ್ಸಾಗಿ ಕೇವಲ ವೈಯಕ್ತಿಕ ಸಮಸ್ಯೆಗಳಿಗೆ ಸೀಮಿತವಾಗಿರಬಾರದು; ಸಮಾಜಾಭಿಮುಖವಾಗಿಯೂ ಇವಳ ನಡೆ ಇರಬೇಕು. ಹಾಗಂತ ನಿರ್ಧರಿಸಿದ ಕ್ರಿಯಾಶೀಲ ತಂಡ ನೈಜ ದುರಂತ ಘಟನೆಯನ್ನು ಕೈಗೆತ್ತಿಕೊಂಡು ಕತೆಯಲ್ಲಿ ಅಳವಡಿಸಿಕೊಂಡಿದ್ದು ವಿಶೇಷ.
ʼ ಈ ವಿಶೇಷ ಸಂಚಿಕೆಯಲ್ಲಿ ನಟಿಸುವಾಗ ನಾನು ನಿಜವಾಗಿಯೂ ಭಾವುಕಳಾಗಿದ್ದೆ. ಗರ್ಭಿಣಿ ಹೆಣ್ಣಿನ ವೇದನೆ, ಅವಳ ಪುಟ್ಟ ಹೆಣ್ಣುಮಗಳ ಅಸಹಾಯಕತೆಯನ್ನು ನೋಡುವಾಗ ನನ್ನ ಮನ ಕಲಕಿದೆ. ಮನಕಲಕುವ ಸತ್ಯ ಘಟನೆ ಆಧಾರಿತ ವಿಷಯಕ್ಕೆ ಅಭಿನಯಿಸಿದ ಸಾರ್ಥಕತೆ ನನಗಿದೆʼ ಎಂದು ರಾಧಿಕಾ ಪಾತ್ರಧಾರಿ ಕಾವ್ಯ ಶಾಸ್ರ್ತಿ ಹಂಚಿಕೊಂಡರು.
ಈ ಸಂಚಿಕೆ ನಿರ್ದೇಶಿಸುವಾಗ ನಾನು ಎಷ್ಟೋ ಸಲ ನಿರ್ದೇಶನವನ್ನು ಮರೆತು ವೀಕ್ಷಕನಂತೆ ನೋಡಿದ್ದಿದೆ, ಪ್ರತಿ ಬಾರಿ ನೈಜ ಘಟನೆ ಕಣ್ಮುಂದೆ ನಡೆಯುತ್ತಿದೆಯೇನೋ ಎಂದು ಅನ್ನಿಸಿ ಕರುಳು ಹಿಂಡಿದಂತಾಗಿತ್ತು.ʼ ಎಂದು ನಿರ್ದೇಶಕ ದರ್ಶಿತ್ ಬಲವಳ್ಳಿ ಹೇಳಿಕೊಂಡರು.
ಒಂದೊಳ್ಳೆ ವಿಷಯವನ್ನಾರಿಸಿಕೊಂಡು ನಮ್ಮ ರಾಧಿಕಾ ಧಾರಾವಾಹಿಯಲ್ಲಿ ಅಳವಡಿಸಿಕೊಂಡಿದ್ದು ನಮಗೆ ಹೆಮ್ಮೆ ಇದೆʼ ಎಂದು ನಿರ್ಮಾಪಕ ಗಣಪತಿ ಭಟ್ ತಿಳಿಸಿದರು
ಈಗಾಗಲೇ ರಾಧಿಕಾಳಿಗೆ ಅಸಂಖ್ಯ ಅಭಿಮಾನಿಗಳಿದ್ದಾರೆ. ಜೊತೆಗೆ ಭಾವುಕ ಅಮ್ಮ ಜಾನಕಿ, ಕುಡುಕ ಅಣ್ಣ ಕಾಶಿ, ಕುಹಕ ದೊಡ್ಡಪ್ಪ ಕರಿಯಪ್ಪ, ವಿರಹಿ ಪ್ರೇಮಿ ಚಿರಂತ್‌ಗೂ ಕೂಡ ಅಭಿಮಾನಿಗಳು ಹುಟ್ಟಿಕೊಂಡಿದ್ದು ಈ ಧಾರಾವಾಹಿಯ ಹಿಗ್ಗು.
ರಾಧಿಕಾ ಪಾತ್ರಕ್ಕೆ ಜೀವ ತುಂಬಿದವರು ಖ್ಯಾತ ನಟಿ ಕಾವ್ಯಾ ಶಾಸ್ತ್ರಿ. ಶರತ್ ಕ್ಷತ್ರಿಯ, ರವಿ ಕಲಾಬ್ರಹ್ಮ, ಸುರೇಶ್ ರೈ, ಮಾಲತಿ ಸರ್ದೇಶಪಾಂಡೆ, ಸವಿತಾ ಕೃಷ್ಣಮೂರ್ತಿ, ಸುನೀಲ್ ಕುಮಾರ್, ಇಂಚರಾ ಶೆಟ್ಟಿ ಮುಂತಾದವರ ತಾರಾಗಣವಿದೆ. ಶ್ರೀದುರ್ಗಾ ಕ್ರಿಯೇಷನ್ಸ್ ಲಾಂಛನದಲ್ಲಿ ಗಣಪತಿ ಭಟ್ ಧಾರಾವಾಹಿ ನಿರ್ಮಿಸುತ್ತಿದ್ದಾರೆ.
ರಾಧಿಕಾ ಧಾರಾವಾಹಿ 300ರ ಸಂಚಿಕೆಯೆಡೆಗೆ ದಾಪುಗಾಲಿಡುತ್ತಿರುವ ಸಂದರ್ಭದಲ್ಲಿ ಈ ವಿಶೇಷ ಸಂಚಿಕೆಗಳು ಒಂದು ವಾರ ಕಾಲ ಸೋಮವಾರದಿಂದ ಶನಿವಾರ ರಾತ್ರಿ ೮:೩೦ಕ್ಕೆ ಪ್ರಸಾರವಾಗಲಿದೆ.