ಮಾರ್ಚ್ 20 ಕ್ಕೆ ಭೂಮಿಗೆ ಬರ್ತಿದಾನೆ ಭಗವಂತ – ಜೀ ಕನ್ನಡ ಚಾನೆಲ್

ಭೂಮಿಗೆ ಬಂದ ಭಗವಂತ , ಕನ್ನಡದ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ ಮಾರ್ಚ್ 20 ರಿಂದ ರಾತ್ರಿ 10ಗಂಟೆಗೆ ಹೊಚ್ಚ ಹೊಸ ಧಾರಾವಾಹಿ ‘ಭೂಮಿಗೆ ಬಂದ ಭಗವಂತ ಪ್ರಸಾರವಾಗಲಿದೆ.
ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರಾಗಿರುವ ಜೀ ಕನ್ನಡ ಈ ಬಾರಿ ಕನ್ನಡ ಕಿರುತೆರೆಯಲ್ಲೇ ಮೊದಲ ಬಾರಿಗೆ ಭಗವಂತ ಮತ್ತು ಮನುಷ್ಯನ ಸಂಬಂಧದ ಕತೆಯನ್ನು ಹೇಳಲು ಹೊರಟಿದೆ.
‘ಭೂಮಿಗೆ ಬಂದ ಭಗವಂತ’ ವಿಶಿಷ್ಟ ಕಥಾಹಂದರ ಹೊಂದಿದ್ದು ಮಧ್ಯಮ ವರ್ಗದ ಜನರ ಕಷ್ಟ , ನಷ್ಟ , ಇಷ್ಟಗಳನ್ನು ಜತೆಗೆ ಅವರು ದೇವರನ್ನು ನೋಡುವ ರೀತಿಯನ್ನು ಅನಾವರಣಗೊಳಿಸಲಿದೆ.
ಈ ಧಾರಾವಾಹಿ ಮಧ್ಯಮ ವರ್ಗದ ಭಾವನೆಗಳಿಗೆ ಕನ್ನಡಿ ಹಿಡಿಯುವುದರ ಜತೆಗೆ, ದೈನಂದಿನ ಬದುಕಿನಲ್ಲಿ ಎದುರಾಗುವ ಅನೇಕ ಗೊಂದಲ , ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನಮಾಡಲಿದೆ. ಮಧ್ಯಮ ವರ್ಗದ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರ ನೀಡಲೆಂದೇ ಕಥಾನಾಯಕನ ಸ್ನೇಹಿತನಾಗಿ ಭಗವಂತ ಭೂಮಿಗೆ ಬರ್ತಿದಾನೆ .
ಖ್ಯಾತ ನಟ – ನಿರ್ದೇಶಕ ನವೀನ್ ಕೃಷ್ಣ , ಕೃತ್ತಿಕಾ, ಹಿರಿಯ ನಟ ಉಮೇಶ್ , ಬಾಲ ಕಲಾವಿದರಾದ ಅಂಕಿತಾ , ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅನುರಾಗ್ ಮತ್ತು ಭಗವಂತನ ಪಾತ್ರದಲ್ಲಿ ಕಾರ್ತಿಕ್ ಸಾಮಗ ಕಾಣಿಸಿಕೊಂಡಿದ್ದಾರೆ . ಅಷ್ಟೇ ಅಲ್ಲದೆ ಎಮ್. ಎನ್. ಸುರೇಶ್ , ಬೆಂಗಳೂರು ನಾಗೇಶ್ , ಪವನ್ , ಗೌತಮಿ ಸೇರಿದಂತೆ ದೊಡ್ಡ ತಾರಾ ಬಳಗ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದೆ.
ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದು, ಸುಧೀಂದ್ರ ಭಾರದ್ವಾಜ್ ಮತ್ತು ರಾಘವೇಂದ್ರ ಸಿ ವಿ ಸಾಹಿತ್ಯ ರಚಿಸಿದ್ದಾರೆ. ಹೆಸರಾಂತ ಗಾಯಕ ಶಂಕರ್ ಮಹದೇವನ್ ಧ್ವನಿಯಾಗಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಎರಡು ಪ್ರೋಮೋಗಳು ವೀಕ್ಷಕರಲ್ಲಿ ಸಂಚಲನ ಮೂಡಿಸಿವೆ.
‘ಜೊತೆ ಜೊತೆಯಲಿ’, ‘ಪುಟ್ಟಕ್ಕನ ಮಕ್ಕಳು’ ಸೇರಿದಂತೆ ಹಲವಾರು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸಿರುವ ಆರೂರು ಜಗದೀಶ್ ಸಾರಥ್ಯದಲ್ಲಿ ತಾಂಡವ್ ಈ ಧಾರಾವಾಹಿ ನಿರ್ಮಿಸಿದ್ದಾರೆ.